News : ರಾಜ್ಯದ ವಿವಿಧ ಸರ್ಕಾರಿ ಮತ್ತು ಅರೆ-ಸರ್ಕಾರಿ ಇಲಾಖೆಗಳಲ್ಲಿ ಬೃಹತ್ ಪ್ರಮಾಣದ ಹುದ್ದೆಗಳು ಖಾಲಿಯಿದ್ದು, ಒಟ್ಟಾರೆ 2,84,881 ಹುದ್ದೆಗಳು ಭರ್ತಿಗಾಗಿ ಬಾಕಿ ಉಳಿದಿವೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಆದರೆ, ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ಆರ್ಥಿಕ ಇಲಾಖೆಯು ಪ್ರಸ್ತುತ ಒಟ್ಟು 24,300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡಿದೆ.
ಖಾಲಿ ಹುದ್ದೆಗಳ ವಿವರ: ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ಹೆಚ್ಚಿನ ಕೊರತೆ
ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಇಲಾಖಾವಾರು ಸಂಪೂರ್ಣ ಮಾಹಿತಿಯನ್ನು ಅನುಬಂಧ-1ರಲ್ಲಿ ಒದಗಿಸಲಾಗಿದೆ. ಈ ಪಟ್ಟಿಯ ಪ್ರಕಾರ, ರಾಜ್ಯದ ಪ್ರಮುಖ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಸಂಖ್ಯೆ ಹೀಗಿದೆ:
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ: 79,694 ಹುದ್ದೆಗಳು (ಅತಿ ಹೆಚ್ಚು).
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ: 37,572 ಹುದ್ದೆಗಳು.
ಒಳಾಡಳಿತ ಇಲಾಖೆ (ಪೊಲೀಸ್ ಸೇರಿ): 28,188 ಹುದ್ದೆಗಳು.
ಉನ್ನತ ಶಿಕ್ಷಣ: 13,599 ಹುದ್ದೆಗಳು.
ಕಂದಾಯ ಇಲಾಖೆ: 10,867 ಹುದ್ದೆಗಳು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: 10,504 ಹುದ್ದೆಗಳು.
ಪಶುಸಂಗೋಪನೆ: 6,876 ಹುದ್ದೆಗಳು.
ಒಟ್ಟಾರೆಯಾಗಿ, 2025-26ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅರೆ-ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ.
ಸಾರ್ವಜನಿಕ ನಿಗಮ/ಮಂಡಳಿಗಳಲ್ಲೂ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ
ಇದಲ್ಲದೆ, ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಲ್ಲೂ ದೊಡ್ಡ ಮಟ್ಟದ ಹುದ್ದೆಗಳು ಖಾಲಿಯಿವೆ. ಕೆಪಿಟಿಸಿಎಲ್‌ನಲ್ಲಿ 34,474 ಹುದ್ದೆಗಳು ಖಾಲಿಯಿದ್ದರೆ, ಕೆಪಿಸಿಎಲ್‌ನಲ್ಲಿ 4,635, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ (ಹೆಸ್ಕಾಂ) 6,540 ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಲ್ಲಿ (ಚೆಸ್ಕಾಂ) 4,105 ಹುದ್ದೆಗಳು ಖಾಲಿಯಿವೆ.
24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ
ಖಾಲಿಯಿರುವ ಹುದ್ದೆಗಳನ್ನು ತುಂಬುವ ಉದ್ದೇಶ ಸರ್ಕಾರಕ್ಕಿರುವಂತೆ ಕಾಣುತ್ತಿಲ್ಲ., ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ಆರ್ಥಿಕ ಇಲಾಖೆಯು ಪ್ರಸ್ತುತ ಒಟ್ಟು 24,300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡಿದೆ. ಈ ಹುದ್ದೆಗಳ ವಿವರಗಳನ್ನು ಅನುಬಂಧ-2ರಲ್ಲಿ ಒದಗಿಸಲಾಗಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ದೊರೆತ ಹುದ್ದೆಗಳನ್ನು ಆಯಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಕಾಲಕಾಲಕ್ಕೆ ಭರ್ತಿ ಮಾಡಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಈ 24,300 ಹುದ್ದೆಗಳಲ್ಲಿ ಸಾರಿಗೆ ಇಲಾಖೆಯಲ್ಲಿ 6,847, ಶಾಲಾ ಶಿಕ್ಷಣ ಮತ್ತು ಸಾಕ್ಷರತೆಯಲ್ಲಿ 5,267, ಇಂಧನ ಇಲಾಖೆಯಲ್ಲಿ 2,400 ಮತ್ತು ಆರ್ಥಿಕ ಇಲಾಖೆಯಲ್ಲಿ 2,243 ಹುದ್ದೆಗಳಿಗೆ ಭರ್ತಿ ಮಾಡಲು ಅನುಮತಿ ದೊರೆತಿದೆ. ಆದಾಗ್ಯೂ, ಹಲವು ವರ್ಷಗಳಿಂದ ನೇಮಕಾತಿಯಾಗದೇ ನಿರುದ್ಯೋಗಿಗಳಾಗಿರುವ ಬಿ.ಪಿ.ಎಡ್ ಪದವೀಧರರಿಗೆ ವಾರ್ಡನ್ ಅಥವಾ ಪರ್ಯಾಯ ಹುದ್ದೆ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಖಾಲಿ ಹುದ್ದೆಗಳಲ್ಲಿ ಶೇ.9ರಷ್ಟು ಭರ್ತಿ
ರಾಜ್ಯದಲ್ಲಿ ಸುಮಾರು 280000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ತಿಳಿಸಿದ್ದಾರೆ. ಅಂದರೆ ಖಾಲಿ ಇರುವ 9 % ರಷ್ಟು ಮಾತ್ರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.
ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತನ್ನ ಹಣವನ್ನೆಲ್ಲ ಬಳಸಿ ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ.