News : ಶ್ರೀಹರಿಕೋಟಾದಿಂದ ಉಡಾವಣೆಯಾದ ಇಸ್ರೋದ ಹೆಮ್ಮೆಯ ಪಿಎಸ್‌ಎಲ್‌ವಿ-ಸಿ62 ರಾಕೆಟ್ ತಾಂತ್ರಿಕ ದೋಷದಿಂದಾಗಿ ತನ್ನ ಗುರಿ ತಲುಪುವಲ್ಲಿ ವಿಫಲವಾಯಿತು.
ಈ ರಾಕೆಟ್ ಹೊತ್ತೊಯ್ಯುತ್ತಿದ್ದ 16 ಉಪಗ್ರಹಗಳು ನಾಶವಾದವು. ಆದರೆ, ಅಚ್ಚರಿಯ ರೀತಿಯಲ್ಲಿ 'KID' (Kestrel Initial Demonstrator) ಎಂಬ ಪುಟ್ಟ ಉಪಗ್ರಹ ಮಾತ್ರ ಅಪಾಯದಿಂದ ಪಾರಾಗಿ ಭೂಮಿಗೆ ಸಂದೇಶ ರವಾನಿಸಿದೆ.
ಸ್ಪ್ಯಾನಿಷ್ ಸ್ಟಾರ್ಟ್‌ಅಪ್ ಆರ್ಬಿಟಲ್ ಪ್ಯಾರಡೈಮ್‌ನ "KID" ಕ್ಯಾಪ್ಸುಲ್ ದುರಂತದಿಂದ ಬದುಕುಳಿದಿದೆ.
ಸ್ಪೇನ್ ದೇಶದ 'ಆರ್ಬಿಟಲ್ ಪ್ಯಾರಡೈಮ್' (Orbital Paradigm) ಎಂಬ ಸ್ಟಾರ್ಟ್-ಅಪ್ ತಯಾರಿಸಿದ 'KID' ಎಂಬ ಫುಟ್‌ಬಾಲ್ ಗಾತ್ರದ ಪುಟ್ಟ ಕ್ಯಾಪ್ಸುಲ್ ಈ ಮಿಷನ್‌ನ ಭಾಗವಾಗಿತ್ತು. ರಾಕೆಟ್ ಪಥ ಬದಲಿಸಿ ವಾತಾವರಣಕ್ಕೆ ಮರುಪ್ರವೇಶಿಸುವಾಗ ಉಂಟಾದ ತೀವ್ರ ಒತ್ತಡದ ನಡುವೆಯೂ, ಈ ಕ್ಯಾಪ್ಸುಲ್ ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು.
ಈ ಯೋಜನೆಯನ್ನು ಫ್ರಾನ್ಸ್ ಮೂಲದ 'ರೈಡ್' (RIDE) ಸಂಸ್ಥೆಯ ತಾಂತ್ರಿಕ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಉಪಗ್ರಹಗಳ ನಿರ್ವಹಣೆ ಹಾಗೂ ಲಾಜಿಸ್ಟಿಕ್ಸ್ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ನೂತನ ವ್ಯವಸ್ಥೆಗಳನ್ನು ರೂಪಿಸುವುದು ಈ ಕಂಪನಿಯ ಪ್ರಮುಖ ಉದ್ದೇಶವಾಗಿದೆ.
ಹಿನ್ನೆಲೆ:
ಜನವರಿ 12, 2026 ರಂದು ಬೆಳಿಗ್ಗೆ 10:17ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.
ರಾಕೆಟ್‌ನ ಮೊದಲ ಎರಡು ಹಂತಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು. ಆದರೆ, ಮೂರನೇ ಹಂತದಲ್ಲಿ ದೋಷ ಕಾಣಿಸಿಕೊಂಡು ರಾಕೆಟ್ ತನ್ನ ಪಥದಿಂದ ವಿಚಲಿತವಾಯಿತು.
ಡಿಆರ್‌ಡಿಒ(DRDO)ದ 'ಅನ್ವೇಷಾ' (Anvesha) ಸೇರಿದಂತೆ ಒಟ್ಟು 16 ಉಪಗ್ರಹಗಳು ಕಕ್ಷೆ ಸೇರಲು ಸಾಧ್ಯವಾಗದೆ ಪೆಸಿಫಿಕ್ ಸಾಗರಕ್ಕೆ ಬಿದ್ದವು.