ಸುದ್ದಿ: ಇರಾನ್ನ ಸವೋಚ್ಚ ನಾಯಕ ಸಯ್ಯದ್ ಅಲಿ ಹೊಸೇನಿ ಖಮೇನಿ ದುರಾಡಳಿತದ ವಿರುದ್ಧ ಇರಾನ್ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿರುವ ಬೆನ್ನಲ್ಲೇ, ಅಮೆರಿಕ ತನ್ನ ವ್ಯಾಪಾರ ಸಮರವನ್ನೂ ತೀವ್ರಗೊಳಿಸಿದೆ. ಇರಾನ್ ಜತೆ ವ್ಯಾಪಾರ ವಹಿವಾಟು ನಡೆಸುವ ದೇಶಗಳ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇಕಡ 25ರಷ್ಟು ಸುಂಕ ಹೇರಿದ್ದಾರೆ.
ಈ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚಲಿದ್ದು, ಈ ನಡುವೆ ಇರಾನ್ ಕರೆನ್ಸಿಯ ಮೌಲ್ಯ ಬಹುತೇಕ ಸೊನ್ನೆಗೆ ತಲುಪಿದೆ. 1979ರಿಂದಲೂ ಅಮೆರಿಕ ಆಗಾಗ ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಲೇ ಇದೆ. ಇರಾನ್ನೊಂದಿಗೆ ಹೆಚ್ಚು ವ್ಯಾಪಾರ ವಹಿವಾಟನ್ನು ಚೀನಾ, ಯುಎಇ, ಭಾರತ, ಟರ್ಕಿ ನಡೆಸುತ್ತೇವೆ.
ಇರಾನ್ ಜತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಘೋಷಿಸಿದ್ದಾರೆ.
ಇಸ್ಲಾಮಿಕ್ ಗಣರಾಜ್ಯದೊಂದಿಗೆ ವಾಣಿಜ್ಯ ವ್ಯವಹಾರ ನಡೆಸುವ ಯಾವುದೇ ದೇಶವು ತಕ್ಷಣದಿಂದ ಜಾರಿಗೆ ಬರುವಂತೆ, ಅಮೆರಿಕದ ಜತೆ ನಡೆಸುವ ಯಾವುದೇ ವ್ಯವಹಾರ ಮತ್ತು ಎಲ್ಲ ವ್ಯವಹಾರಗಳ ಮೇಲೆ ಶೇ.25ರಷ್ಟು ಸುಂಕವನ್ನು ಪಾವತಿಸಬೇಕು. ಈ ಆದೇಶವು ಅಂತಿಮ ಹಾಗೂ ನಿರ್ಣಾಯಕವಾಗಿದೆ' ಎಂದಿದ್ದಾರೆ.
ಅಕ್ಕಿ ರಫ್ತಿಗೆ ಅಡ್ಡಿ :
ಇರಾನ್ನಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರತದಿಂದ ಬಾಸ್ಮತಿ ಅಕ್ಕಿ ರಫ್ತಿಗೆ ಅಡ್ಡಿಯಾಗಿದೆ ಮತ್ತು ಈಗಾಗಲೇ ರಫ್ತು ಮಾಡಿರುವ ಅಕ್ಕಿಯ ಮೌಲ್ಯವನ್ನು (ಪಾವತಿ) ಪಡೆದುಕೊಳ್ಳಲು ವಿಳಂಬವಾಗಲಿದೆ. ಭಾರತ 2025ರ ಏಪ್ರಿಲ್ನಿಂದ ನವೆಂಬರ್ ಅವಧಿಯಲ್ಲಿ ಇರಾನ್ಗೆ 468.10 ಮಿಲಿಯನ್ ಡಾಲರ್ ಮೊತ್ತದ 5.99 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಿದೆ. ಭಾರತದಿಂದ ಬಾಸ್ಮತಿ ಅಕ್ಕಿ ಹೆಚ್ಚು ರಫ್ತಾಗುವ ದೇಶಗಳಲ್ಲಿ ಇರಾನ್ ಮೊದಲನೆಯದು.
ಇರಾನ್ನಿಂದ ಭಾರತವು ಒಣಹಣ್ಣುಗಳು (ಡ್ರೈಫ್ರೂಟ್ಸ್), ಸಾವಯವ ರಾಸಾಯನಿಕಗಳು ಮತ್ತು ಗಾಜಿನ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಲ್ಲದೆ, ಭಾರತವು ಇರಾನ್ಗೆ ಬಾಸ್ಮತಿ ಅಕ್ಕಿ, ಚಹಾಪುಡಿ, ಸಕ್ಕರೆ, ಔಷಧಗಳು, ಮಾನವನಿರ್ವಿುತ ನಾರು ಉತ್ಪನ್ನಗಳು, ವಿದ್ಯುತ್ ಯಂತ್ರೋಪಕರಣಗಳು ರಫ್ತು ಮಾಡುತ್ತಿದೆ.
ಇರಾನ್ನಿಂದ ಭಾರತ ಕಚ್ಚಾ ತೈಲವನ್ನು ದೊಡ್ಡ ಮಟ್ಟದಲ್ಲಿ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಅಮೆರಿಕದ ನಿರ್ಬಂಧದ ಬಳಿಕ ಕಚ್ಚಾ ತೈಲದ ಆಮದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. 2025ರ ಮೊದಲ 10 ತಿಂಗಳುಗಳಲ್ಲಿ (ಜನವರಿ-ಅಕ್ಟೋಬರ್) ದ್ವಿಪಕ್ಷೀಯ ವ್ಯಾಪಾರದ ಮೊತ್ತ ಸುಮಾರು 1.34 ಬಿಲಿಯನ್ ಡಾಲರ್ ಆಗಿದೆ. ಇದು ಭಾರತದ ಒಟ್ಟು ವ್ಯಾಪಾರದಲ್ಲಿ ತುಂಬ ಸಣ್ಣ ಪಾಲು (ಸುಮಾರು 0.1-0.2%).
ಕರೆನ್ಸಿ ಮೌಲ್ಯ ಕುಸಿತ :
ಇರಾನ್ನಲ್ಲಿ ಬೆಲೆಏರಿಕೆಯನ್ನು ವಿರೋಧಿಸಿ ಮತ್ತು ಸರ್ಕಾರದ ಆರ್ಥಿಕ ನೀತಿಗಳನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇದರಿಂದ, ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಕ್ಷೀಣಗೊಂಡಿದ್ದು, ಕರೆನ್ಸಿ ಮೌಲ್ಯ ಕುಸಿತ ಕಂಡಿದೆ. ಭಾರತೀಯ ರೂಪಾಯಿಯಲ್ಲಿ 1 ರಿಯಾಲ್ ನ (ಇರಾನ್ ಕರೆನ್ಸಿ) ಮೌಲ್ಯ 0.000079 ರೂ.ಗೆ ಬಂದು ತಲುಪಿದೆ.
ನಿಷೇಧ ಹೊಸದೇನಲ್ಲ :
1979ರ ವರ್ಷ. ಇರಾನ್ನಲ್ಲಿ 'ಇಸ್ಲಾಮಿಕ್ ಕ್ರಾಂತಿ' ಸಂಭವಿಸಿತು. ತೆಹರಾನ್ನಲ್ಲಿ ಅಮೆರಿಕದ ರಾಯಭಾರಿ ಕಚೇರಿಯನ್ನು ವಶಪಡಿಸಿಕೊಂಡು, ಅಮೆರಿಕದ 52 ನಾಗರಿಕರನ್ನು ಒತ್ತೆ ಇರಿಸಲಾಯಿತು. ಇದಾದ 46 ವರ್ಷಗಳಲ್ಲಿ ಅಮೆರಿಕ ಇರಾನ್ ಮೇಲೆ ಹಲವು ಬಾರಿ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಮಾತ್ರವಲ್ಲ, 1980ರಿಂದಲೇ ಅಮೆರಿಕ ಇರಾನ್ ಜತೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ.
1979- ಇರಾನ್ನ ಸ್ವತ್ತುಗಳನ್ನು ವಶಪಡಿಸಿಕೊಂಡಿತು ಮತ್ತು ಇರಾನ್ನೊಂದಿಗೆ ವ್ಯಾಪಾರ ವಹಿವಾಟನ್ನು ನಿಷೇಧಿಸಿತು.
1995- ಇರಾನ್ನ ಕಚ್ಚಾ ತೈಲ ಹಾಗೂ ಅನಿಲ ಕ್ಷೇತ್ರದಲ್ಲಿ ಅಮೆರಿಕ ಕಂಪನಿಗಳ ಹೂಡಿಕೆಯನ್ನು ನಿಷೇಧಿಸಲಾಯಿತು. ಮಾತ್ರವಲ್ಲ, ಇರಾನ್ನಿಂದ ಕಚ್ಚಾ ತೈಲ ಆಮದನ್ನು ಸಂಪೂರ್ಣವಾಗಿ ಬಂದ್ ಮಾಡಿತು.
2006-2010: ಅಣ್ವಸ್ತ್ರಗಳನ್ನು ಹೊಂದಲು ಈ ಕಾಲಾವಧಿಯಲ್ಲಿ ಇರಾನ್ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿತು. ಪರಿಣಾಮ, ಅಮೆರಿಕ ಬ್ಯಾಂಕಿಂಗ್, ಶಸ್ತ್ರಾಸ್ತ್ರ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರಗಳ ಮೇಲೆ ನಿಷೇಧ ಹೇರಿತು, ಇರಾನ್ನ ಅಣ್ವಸ್ತ್ರ ಕಾರ್ಯಕ್ರಮ ಜಾರಿಯಾಗದಂತೆ ಹಲವು ದಿಕ್ಕಿನಲ್ಲಿ ಆ ದೇಶವನ್ನು ನಿರ್ಬಂಧಗಳ ಮೂಲಕವೇ ಸುತ್ತುವರಿಯಿತು.
2012: ಇರಾನ್ನ ಸೆಂಟ್ರಲ್ ಬ್ಯಾಂಕ್ ಮೇಲೆ ನಿಷೇಧ ಹೇರಿತು. SWIFT ಸಿಸ್ಟಮ್ಂದ ಇರಾನ್ ಬ್ಯಾಂಕುಗಳನ್ನು ಹೊರಗಿಟ್ಟಿತು.
2015: ಪರಮಾಣು ಒಪ್ಪಂದ JCPOA ಅಂತಿಮಗೊಂಡ ಬಳಿಕ ಕೆಲ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
2018: JCPOAಯಿಂದ ಹೊರಬಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ಮಟ್ಟದ ನಿರ್ಬಂಧಗಳನ್ನು ಮರುಜಾರಿಗೊಳಿಸಿದರು.
2024: ಇರಾನ್ನೊಂದಿಗೆ ವ್ಯಾಪಾರ ವಹಿವಾಟು ನಡೆಸುವ ದೇಶಗಳು ಮತ್ತು ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿತು.
2026: ಇರಾನ್ ಜತೆ ವಾಣಿಜ್ಯ ವಹಿವಾಟು ನಡೆಸುವವರ ಮೇಲೆ ಶೇಕಡ 25 ಸುಂಕ ಹೇರುವ ಘೋಷಣೆ.
ಮೂಲ : ವಿಜಯವಾಣಿ