Language Settings
Select Website Language

ಕರ್ನಾಟಕ - ತಮಿಳುನಾಡು ರಾಜ್ಯಗಳ ನಡುವೆ ದಕ್ಷಿಣ ಪಿನಾಕಿನಿ ನದಿ ವಿವಾದ (Pinakini)

3 months ago

ಕರ್ನಾಟಕ - ತಮಿಳುನಾಡು ರಾಜ್ಯಗಳ ನಡುವೆ ದಕ್ಷಿಣ ಪಿನಾಕಿನಿ ನದಿ ವಿವಾದ 

  • ಕಾವೇರಿ ಬಳಿಕ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ದಕ್ಷಿಣ ಪಿನಾಕಿನಿ ಅಥವಾ ಪೆನ್ನಾರ್ ನದಿಯ ನೀರು ಹಂಚಿಕೆ ವಿವಾದ ಎಬ್ಬಿತ್ತು. 
  • ಇದೀಗ ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿಯನ್ನು ಪುರಸ್ಕರಿಸುವ ಮೂಲಕ ಕರ್ನಾಟಕಕ್ಕೆ ಹಿನ್ನಡೆ ಆಗಿದೆ. 

ಸುಪ್ರೀಂ ತೀರ್ಪು ಏನು?  

  • ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್‌ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ಜಲ ವಿವಾದ ನ್ಯಾಯಾಧೀಕರಣ ರಚಿಸುವಂತೆ ಕೋರಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಫೆಬ್ರವರಿ 2ರಂದು ತೀರ್ಪು ನೀಡಿದೆ. 
  • ಜಲವಿವಾದ ನ್ಯಾಯಾಧೀಕರಣ ರಚಿಸುವಂತೆ ಆದೇಶ ಹೊರಡಿಸಿದೆ. ಆದೇಶ ಪ್ರಕಟವಾದ 1 ತಿಂಗಳೊಳಗೆ ನ್ಯಾಯಾಧೀಕರಣ ರಚನೆಗೆ ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. 
  • ಪೆನ್ನಾರ್‌ ನದಿ ಮತ್ತು ಅದರ ಉಪ ನದಿ ಮಾರ್ಕಾಂಡೇಯ ನದಿ ಪಾತ್ರದಲ್ಲಿ ಕರ್ನಾಟಕ ಸರಕಾರ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಇದನ್ನು ವಿರೋಧಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. 
  • ತಮಿಳುನಾಡು ನಡೆಗೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದ್ದು, ‘‘ಕರ್ನಾಟಕ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ
  • ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. 
  • ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ,’’ ಎಂದು ವಾದಿಸಿತ್ತು. 
  • ಆದರೆ ಇದೀಗ ಕರ್ನಾಟಕದ ಯೋಜನೆಗಳಿಗೆ ಹಿನ್ನಡೆಯಾಗಿದ್ದು, ತಾತ್ಕಾಲಿಕ ತಡೆ ಬೀಳಲಿದೆ. 
  • ನ್ಯಾಯಾಧೀಕರಣ ರಚನೆಯಾದ ಬಳಿಕ ಅದರ ತೀರ್ಮಾನದಂತೆ ಕರ್ನಾಟಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿದೆ. 

ದಕ್ಷಿಣ ಪಿನಾಕಿನಿ ನದಿ ಹರಿಯುವುದೆಲ್ಲಿ?

  • ದಕ್ಷಿಣ ಪಿನಾಕಿನಿಯು ನಂದಿ ಬೆಟ್ಟಗಳಲ್ಲಿ ಹುಟ್ಟಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಜಲಮೂಲವಾಗಿದೆ. 
  • ಅಲ್ಲದೆ ದಕ್ಷಿಣ ಪಿನಾಕಿನಿ ನದಿಗೆ ಮಾರ್ಕಂಡೇಯ ನದಿ, ಯರಗೋಳ, ಕುಶಾವತಿ ಎಂಬ ಉಪನದಿಗಳೂ ಇವೆ. 
  • ಪೆನ್ನಾರ್ ನದಿಯು ಒಂದು ಹರಿವಿನ ದಿಕ್ಕು ಆಂಧ್ರಪ್ರದೇಶದ ಮೂಲಕ ಬಂಗಾಳಕೊಲ್ಲಿಯನ್ನು ಸೇರಿದರೆ, ಇನ್ನೊಂದು ಭಾಗ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿಗೆ ಸೇರುತ್ತದೆ.

ಕರ್ನಾಟಕದಿಂದ-ತಮಿಳುನಾಡಿಗೆ ಹರಿವು ಹೇಗೆ?  

  • ಈ ನದಿಯಿಂದ ಬೆಂಗಳೂರು ಸುತ್ತಲಿನ ಹೊಸಕೋಟೆ, ಬೆಳ್ಳಂದೂರು, ವರ್ತೂರು, ಬಾಗಲೂರು, ಮೂಲಕ ತಮಿಳುನಾಡಿನ ಹೊಸೂರು ಸಮೀಪ ಕೆಳವಾರಿಪಲ್ಲಿ ಎಂಬ ಜಲಾಶಯಕ್ಕೆ ಹರಿದು ಅಲ್ಲಿಂದ ಕೃಷ್ಣಗಿರಿ ಡ್ಯಾಂ, ಕಾವೇರಿ ಪಟ್ಟಣ, ಸಾತನೂರು ಡ್ಯಾಂ, ಮುಡಿಯನೂರು ಮೂಲಕ ಕಡಲೂರು ಬೀಚ್‌ನಲ್ಲಿ ಬಂಗಾಳ ಕೊಲ್ಲಿಗೆ ಸೇರುತ್ತದೆ. 
  • ಆದರೆ ಬೆಂಗಳೂರಿನಲ್ಲಿರುವ ದಕ್ಷಿಣ ಪಿನಾಕಿನಿಯ ಜಲಾನಯನ ಪ್ರದೇಶಗಳಾದ ಬೆಳ್ಳಂದೂರು, ವರ್ತೂರು ಕೆರೆಗಳು ಕೈಗಾರಿಕೆಗಳ  ತ್ಯಾಜ್ಯದಿಂದ ಸಂಪೂರ್ಣ ಕಲುಶಿತಗೊಂಡಿವೆ. 
  • ರಾಜ್ಯದಲ್ಲಿ ಮಾತ್ರವಲ್ಲದೆ ಹೊಸೂರು, ಚೆಂಗಂ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೂಡಾ ದಕ್ಷಿಣ ಪಿನಾಕಿನಿಯ ಒಡಲನ್ನು ಸೇರಿದೆ. 

ವಿವಾದಕ್ಕೊಳಗಾದ ಯೋಜನೆ ಯಾವುದು?   

  • ಕರ್ನಾಟಕವು ದಕ್ಷಿಣ ಪಿನಾಕಿನಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿರುವುದಕ್ಕೆ ತಮಿಳುನಾಡು ವಿರೋಧಿಸಿದೆ.
  •  ಅಲ್ಲದೆ ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಯೋಜನೆ ಹಾಗೂ ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳಿಗೆ ವಿರೋಧ ವ್ಯಕ್ತವಾಗಿತ್ತು. 
  • ಈ ಯೋಜನೆಗಳಿಂದ ತಮಿಳುನಾಡು ರೈತರಿಗೆ ನೀರಿನ ಕೊರತೆ ಆಗುತ್ತದೆಯೆಂದು ವಾದಿಸಿತ್ತು. 
  • ಈ ವಿವಾದ 2018 , ಮೇ ತಿಂಗಳಿಂದಲೇ ಆರಂಭವಾಗಿತ್ತು. 
  • ಆದರೆ ಕೋಲಾರದ ಯರಗೋಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಕೇಂದ್ರ ಸರಕಾರವೇ ಅನುಮೋದನೆ ನೀಡಿತ್ತು. 
  • 240 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಈ ಜಲಾಶಯದಲ್ಲಿ ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುತ್ತದೆ. 
  • ಇದರಿಂದಲೂ ತಮಿಳುನಾಡಿಗೆ ಪ್ರತಿ ವರ್ಷ 10 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಲಾಗಿತ್ತು. 
  • ರಾಜ್ಯವು 7.5 ಟಿಎಂಸಿ ನೀರು ಮಾತ್ರ ಹರಿಸಿದ್ದರಿಂದ ನ್ಯಾಯಮಂಡಳಿಯ ಸ್ಥಾಪನೆಗೆ ತಮಿಳುನಾಡು ಪಟ್ಟು ಹಿಡಿದಿತ್ತು, ಆ ಪ್ರಕಾರ ಈಗ ನ್ಯಾಯಾಧೀಕರಣ ರಚನೆಯಾಗಿದೆ.