News : ಕಾಂಗೊದಲ್ಲಿ ಎಬೋಲಾ ವ್ಯಾಪಕವಾಗಿ ಹರಡುತ್ತಿದ್ದು, ಪರಿಸ್ಥಿತಿ ತೀವ್ರ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
ಪೂರ್ವ ಕಾಂಗೋದಲ್ಲಿ ಎಬೋಲಾ ವೈರಸ್ನಿಂದ ಏಕಾಏಕಿ 131 ಜನರು ಸಾವನ್ನಪ್ಪಿದ್ದಾರೆ. 500ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ವರದಿಯಾಗಿವೆ. ಈ ಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ(WHO) 'ಜಾಗತಿಕ ಆರೋಗ್ಯ ತುರ್ತುಸ್ಥಿತಿ' ಎಂದು ಘೋಷಣೆ ಮಾಡಿದೆ.
ಎಬೋಲಾ ವೈರಸ್ ಎಂದರೇನು?
ಸಾಮಾನ್ಯವಾಗಿ ಎಬೋಲಾ ಒಂದು ಗಂಭೀರ ವೈರಲ್ ಸೋಂಕು. ಸೋಂಕಿತ ವ್ಯಕ್ತಿಯ ರಕ್ತ, ದೇಹದ ದ್ರವಗಳು ಅಥವಾ ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಇದು ಹರಡುತ್ತದೆ.
1976ರಲ್ಲಿ ಕಾಂಗೋದಲ್ಲಿ ಮೊದಲ ಬಾರಿ ಈ ವೈರಸ್ ಪತ್ತೆಯಾಯಿತು. ಬಳಿಕ ಉಪ- ಸಹಾರಾ ಆಫ್ರಿಕಾದ ಹಲವು ಪ್ರದೇಶಗಳಲ್ಲಿ ಪ್ರಕರಣಗಳು ವರದಿಯಾಗಿವೆ.
ತಜ್ಞರ ಪ್ರಕಾರ, ಎಬೋಲಾ ಸೋಂಕಿನ ಮರಣ ಪ್ರಮಾಣ ತುಂಬಾ ಹೆಚ್ಚು. ಕೆಲ ಸಂದರ್ಭಗಳಲ್ಲಿ ಸೋಂಕಿತ ವ್ಯಕ್ತಿಯ ದೇಹದ ಒಳಭಾಗದಲ್ಲಿ ರಕ್ತಸ್ರಾವ ಉಂಟಾಗಿ ಜೀವಕ್ಕೆ ಅಪಾಯವಾಗಬಹುದು. ಕೆಲವು ಅಧ್ಯಯನಗಳ ಪ್ರಕಾರ, ಈ ವೈರಸ್‌ನ ಮರಣ ಪ್ರಮಾಣ 80ರಿಂದ 90 ಶೇಕಡಾವರೆಗೆ ಇರಬಹುದು. ಹಾಗಾಗಿ ಎಚ್ಚರಿಕೆ ಅನುಸರಿಸುವುದು ಬಹಳ ಅನಿವಾರ್ಯವಾಗಿದೆ.
ಅಪಾಯಕಾರಿ ಏಕೆ?
ಎಬೋಲಾ ವೈರಸ್ ಹಲವು ರೂಪಗಳಲ್ಲಿ ಕಂಡುಬರುತ್ತದೆ. ಕೆಲವು ಸ್ಟ್ರೇನ್‌ಗಳ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದ್ದರೂ, ಎಲ್ಲ ರೂಪಗಳ ಮೇಲೂ ಅದು ಸಮಾನವಾಗಿ ಕೆಲಸ ಮಾಡುವುದಿಲ್ಲ. ಅದೇರೀತಿ ಎಬೋಲಾದ ಬುಂಡಿಬುಗ್ಯೊ (Bundibugyo) ಎಂಬ ಅಪಾಯಕಾರಿ ಸ್ಟ್ರೇನ್ ಈಗ ಹೆಚ್ಚು ಪ್ರಕರಣಗಳಿಗೆ ಕಾರಣವಾಗುತ್ತಿದೆ. ಈ ಸ್ಟ್ರೇನ್ ವಿರುದ್ಧ ಪರಿಣಾಮಕಾರಿ ಮತ್ತು ಪ್ರಮಾಣಿತ ಲಸಿಕೆ ಇನ್ನೂ ಲಭ್ಯವಿಲ್ಲ. ಇದೇ ಕಾರಣದಿಂದ ಸೋಂಕಿನ ಭೀತಿ ಹೆಚ್ಚುತ್ತಿದೆ. ಇದಕ್ಕೂ ಹೊರತು, ಆಫ್ರಿಕಾದ ದೂರದ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ, ಸಮಯಕ್ಕೆ ಚಿಕಿತ್ಸೆ ಸಿಗದಿರುವುದು ಹಾಗೂ ಲಸಿಕೆ ತಲುಪಿಸುವಲ್ಲಿ ಆಗುತ್ತಿರುವ ತೊಂದರೆಗಳು ಪರಿಸ್ಥಿತಿಯನ್ನು ಗಂಭೀರಗೊಳಿಸುತ್ತಿವೆ.
ಎಬೋಲಾ ವೈರಸ್‌ನ ಲಕ್ಷಣಗಳು:
ದೇಹ ನೋವು ಮತ್ತು ದೌರ್ಬಲ್ಯ
ತೀವ್ರ ಜ್ವರ
ವಾಂತಿ
ತಲೆನೋವು
ದೇಹದ ಒಳ ಹಾಗೂ ಹೊರ ರಕ್ತಸ್ರಾವ
ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?
ತಜ್ಞರು ಹೇಳುವಂತೆ, ಸೋಂಕು ಹೆಚ್ಚಿರುವ ಪ್ರದೇಶಗಳಿಗೆ ಅನಗತ್ಯ ಪ್ರಯಾಣ ತಪ್ಪಿಸುವುದು ಉತ್ತಮ. ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ದೂರವಿರಬೇಕು. ಕೈಗಳ ಸ್ವಚ್ಛತೆ ಮತ್ತು ಆರೋಗ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ.